ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ‘ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ’ಗೆ ಅಧಿಸೂಚನೆ: 1138.04ಎಕರೆ ಭೂಪ್ರದೇಶ; ಶೇ.85 ಕೃಷಿಯೋಗ್ಯ ಭೂಮಿ ವಶ

ಕಾರ್ಕಳ: ‘ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ’ಗೆ ಅಧಿಸೂಚನೆ: 1138.04ಎಕರೆ ಭೂಪ್ರದೇಶ; ಶೇ.85 ಕೃಷಿಯೋಗ್ಯ ಭೂಮಿ ವಶ

Fri, 22 Jan 2010 19:52:00  Office Staff   S.O. News Service

ಉಡುಪಿ, ಜ.22: ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಡ, ಬೆಳ್ಮಣ್, ನಂದಳಿಕೆ ಗ್ರಾಮಗಳ ೧೧೩೮.೦೪ ಎಕರೆ ಪ್ರದೇಶದಲ್ಲಿ ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ ಸದ್ದಿಲ್ಲದೆಯೇ ತಳವೂರಲು ಯತ್ನಿಸುತ್ತಿದ್ದು, ಈ ಬಗ್ಗೆ ಸಕಾಲದಲ್ಲಿ ಎಚ್ಚೆತ್ತುಕೊಂಡಿರುವ ಸ್ಥಳೀಯ ಗ್ರಾಮಸ್ಥರು ತೀವ್ರತರದ ಹೋರಾಟಕ್ಕೆ ಇಳಿದಿದ್ದಾರೆ.

ರಾಜ್ಯ ಸರಕಾರ ಗೌಪ್ಯವಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹುನ್ನಾರ ನಡೆಸುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ೨೦೦೯ರ ನ.೭ರಂದು ಈ ಕುರಿತಂತೆ ಅಧಿಸೂಚನೆ ಹೊರಡಿಸಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಸ್ಥಳೀಯವಾಗಿ ವಿಚಾರ ವಿನಿಮಯ, ಚರ್ಚೆಗಳನ್ನು ನಡೆಸದೇ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದ್ದು, ಇದೀಗ ಈ ವಿಚಾರಗಳು ಒಂದೊಂದಾಗಿಯೇ ಬಹಿರಂಗಗೊಳ್ಳುತ್ತಿವೆ.

ಈ ಯೋಜನೆಗೆ ಸೂಡ ಗ್ರಾಮದ ೩೮೯.೧೭ ಎಕರೆ ಖಾಸಗಿ ಜಮೀನು ಹಾಗೂ ೩೪.೬೧ ಎಕರೆ ಸರಕಾರಿ ಜಮೀನು (ಒಟ್ಟು ೪೨೩.೭೮ಎಕರೆ), ಬೆಳ್ಮಣ್ ಗ್ರಾಮದ ೮೭.೭೯ಎಕರೆ ಖಾಸಗಿ ಜಾಗ ಹಾಗೂ ೧೯.೫೧ಎಕರೆ ಸರಕಾರಿ ಜಾಗ (೧೦೭.೩೦ಎಕರೆ) ಮತ್ತು ನಂದಳಿಕೆ ಗ್ರಾಮದ ೪೮೧.೯೫ಎಕರೆ ಖಾಸಗಿ ಜಮೀನು ಹಾಗೂ ೧೨೫.೦೧ಎಕರೆ ಸರಕಾರಿ ಜಮೀನು (೬೦೬.೯೬ಎಕರೆ) ಒಳಪಡಲಿವೆ.

ಸುಮಾರು ಒಂದು ಸಾವಿರ ಮನೆಗಳು ಹಾಗೂ ೪ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಸಂಪೂರ್ಣ ಜನವಸತಿಯ ಪ್ರದೇಶ ಇದಾಗಿದ್ದು, ಇಲ್ಲಿನ ಹೆಚ್ಚಿನ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಯೋಜನೆಗೆ ಗುರುತಿಸಲಾಗಿರುವ ಭೂಪ್ರದೇಶದಲ್ಲಿ ಶೇ.೮೫ ಕೃಷಿ ಭೂಮಿಯೇ ಇದ್ದು, ತೆಂಗು, ಅಡಿಕೆ, ಭತ್ತದ ಕೃಷಿಯನ್ನೇ ನಂಬಿ ಸಾಕಷ್ಟು ಕುಟುಂಬಗಳು ಇಲ್ಲಿ ಬದುಕು ನಡೆಸುತ್ತಿವೆ. 

ಸೂಡ-ನಂದಳಿಕೆ ಗ್ರಾಮದಲ್ಲಿ ಹರಿಯುತ್ತಿರುವ ಪಾಪನಾಶಿನಿ ಹೊಳೆಯ ಸುಮಾರು ೩ಕಿ.ಮೀ.ನಷ್ಟು ಭಾಗ ಈ ಯೋಜನೆಯ ವ್ಯಾಪ್ತಿಗೆ ಬರಲಿದೆ. ಸಾಕಷ್ಟು ಎಕರೆ ಅರಣ್ಯ ಪ್ರದೇಶ ಈ ಯೋಜನೆಯಿಂದ ಸಂಪೂರ್ಣ ನಾಶವಾಗಲಿದೆ. ಫಲವತ್ತ್ತಾದ ಕೃಷಿಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿರುವ ಗ್ರಾಮಸ್ಥರು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

ಹೋರಾಟದ ಹೆಜ್ಜೆಗಳು: ಸುವರ್ಣ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು  ಬೆಳ್ಮಣ್ ಗ್ರಾಪಂ ಕಾರ್ಯದರ್ಶಿಗೆ ಕಳುಹಿಸಿರುವ ಅಧಿಸೂಚನೆ ಸ್ಥಳೀಯ ಗ್ರಾಪಂ ಸದಸ್ಯರ ಗಮನಕ್ಕೆ ಬರುವ ಮೂಲಕ ರಹಸ್ಯವಾಗಿದ್ದ ಯೋಜನೆಯ ಕೆಲ ವಿವರಗಳು ಬಹಿರಂಗಗೊಂಡವು. ೧೫ ದಿನಗಳ ಹಿಂದೆಯಷ್ಟೆ ಈ ವಿಚಾರವನ್ನು ತಿಳಿದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಒಂದಾಗಿ ಈ ಯೋಜನೆಯ ವಿರುದ್ಧ ಮೂರು ಗ್ರಾಮಗಳ ಭೂಸಂತ್ರಸ್ತರ ಹೋರಾಟ ಸಮತಿಯನ್ನು ಕಟ್ಟಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.  

ಮೊದಲಿಗೆ ಬೆಳ್ಮಣ್ ಗ್ರಾಮಸಭೆಯಲ್ಲಿ ಈ ಯೋಜನೆಯನ್ನು ವಿರೋಧಿಸಿ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಹೋರಾಟ ಸಮಿತಿಯವರು ಜನಸ್ಪಂದನ ಸಭೆಯನ್ನು ಬಹಿಷ್ಕರಿಸಿ ಯೋಜನೆ ಕೈಬಿಡುವಂತೆ ಪ್ರತಿಭಟನೆ ನಡೆಸಿದರು. 

ಯೋಜನೆ ವಿರೋಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯ ೧೩ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ.  ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ಸಮಿತಿ, ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ನಾಳೆ(ಜ.೨೩) ನಂದಳಿಕೆ, ಸೂಡ ಹಾಗೂ ಬೆಳ್ಮಣ್ ಗ್ರಾಮಗಳಲ್ಲಿ  ಸಂಪೂರ್ಣ ಬಂದ್ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ.

ದಾವಣಗೆರೆ ಮಾದರಿ ಹೋರಾಟ: ರಾಜ್ಯ ಸರಕಾರ ನಮ್ಮ ಹೋರಾಟಕ್ಕೆ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರೈತರು ನಡೆಸಿದ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಹಾಗೂ ಕಾರ್ಯದರ್ಶಿ ಕ್ಸೇವಿಯರ್ ಡಿಮೆಲ್ಲೋ ಪತ್ರಿಕೆಗೆ ತಿಳಿಸಿದ್ದಾರೆ.

ಈ ಬಗ್ಗೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ರಾಜ್ಯಮಟ್ಟದ ಹೋರಾಟಗಾರರನ್ನು ಭೇಟಿಯಾಗಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದರು.

 

ಈ ಯೋಜನೆ ಕಾರ್ಯಗರ್ತಗೊಂಡಲ್ಲಿ ತುಳು ಸಂಸ್ಕೃತಿ, ಫಲವತ್ತಾದ ಕೃಷಿಭೂಮಿಯ ಮೇಲೆ ಸಮಾಧಿ ಕಟ್ಟಿದಂತಾಗುತ್ತದೆ. ಈ ಹೋರಾಟಕ್ಕೆ ಈಗಾಗಲೇ  ಸುತ್ತಲಿನ ನಿಟ್ಟೆ, ಕಲ್ಯ, ಕರಿಂಜೆ, ಮುದ್ದೂರು, ಇನ್ನಾ, ಪಿಲಾರು ಗ್ರಾಮ ಪಂಚಾಯತ್‌ಗಳು ಬೆಂಬಲ ವ್ಯಕ್ತಪಡಿಸಿವೆ. ಸರಕಾರ ಈ ಯೋಜನೆ ಯನ್ನು ಕೈಬಿಡುವವರೆಗೂ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಣ್ಮರೆಯ ಭೀತಿಯಲ್ಲಿ...!

* ಸುಮಾರು ೧ಸಾವಿರ ಮನೆಗಳು, ೪ ಶಿಕ್ಷಣ ಸಂಸ್ಥೆಗಳು
* ೯೫೦ಎಕರೆ ಕೃಷಿ ಪ್ರದೇಶಗಳು, ೨ ವೆಂಟೆಡ್ ಡ್ಯಾಮ್‌ಗಳು, 
* ಆರು ದೇವಸ್ಥಾನಗಳು, ನಾಗಬನಗಳು, ೨ ಚರ್ಚ್‌ಗಳು
* ತುಳುನಾಡ ಜನರ ನಂಬಿಕೆಯ ಸಿರಿಯ ಮೂಲಸ್ಥಾನ
* ಕನ್ನಡದ ಕವಿ ಮುದ್ದಣನ ನೆಲೆಡು ನಂದಳಿಕೆ
* ಮೈಸೂರು ಅರಮನೆಯ ಸಂಸ್ಕೃತ ವಿದ್ವಾಂಸ ಬಿಡಾರ ಕೃಷ್ಣಪ್ಪರ ಜನ್ಮಸ್ಥಳ
* ೬೦೦ವರ್ಷಗಳ ಇತಿಹಾಸ ಹೊಂದಿರುವ ಚಾವಡಿ ಅರಮನೆ

ಪೆಟ್ರೋಲಿಯಂ ಯಾ ರಾಸಾಯನಿಕ ಕೈಗಾರಿಕೆ ಸ್ಥಾಪನೆ?

ಬೆಳ್ಮಣ್ ಪರಿಸರದ ೧೧೩೮ ಎಕರೆ ಪ್ರದೇಶವನ್ನು ವಶಪಡಿಸಿಕೊಂಡು ‘ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ’ಯ ಹೆಸರಿನಲ್ಲಿ ಸರಕಾರ ನಿಜವಾಗಿ ಸ್ಥಾಪಿಸುವ ಉದ್ಯಮ ಯಾವುದು ಎಂಬ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಆದರೆ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪ್ರದೇಶ ಸೇರಿದಂತೆ ಸುಮಾರು ೩೦,೦೦೦ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ತಲೆ ಎತ್ತುವ ಪ್ರಸ್ತಾಪವಿದ್ದ ಕೇಂದ್ರ ಸರಕಾರದ ಪೆಟ್ರೋಲ್ ಹಾಗೂ ಅದಕ್ಕೆ ಸಂಬಂಧಿಸಿದ ಉದ್ಯಮಗಳ ’ಪಿಸಿಪಿ‌ಐ‌ಆರ್ ಯೋಜನೆ’ಯನ್ನು ಹೀಗೆ ಹಿಂಬಾಗಿಲಿನ ಮೂಲಕ ತರಲು ಇಲ್ಲಿಂದ ಸಿದ್ಧತೆಗಳು ಆರಂಭಗೊಳ್ಳುತ್ತಿವೆಯೇ ಎಂಬ ಸಂಶಯ ಕೆಲವರಲ್ಲಿ ಮೂಡುತ್ತಿದೆ.

ಮೆಗಾ ಪ್ರಾಜೆಕ್ಟ್ ಎನಿಸಿದ ಸಾವಿರಾರು ಕೋಟಿ ರೂ.ಗಳ ಪಿಸಿಪಿ‌ಐ‌ಆರ್ ಪ್ರಸ್ತಾಪ ಎದುರಾಗುತ್ತಲೇ ಎದ್ದ ವಿರೋಧದಿಂದ ತಕ್ಷಣ ಎಚ್ಚೆತ್ತ ಬಿಜೆಪಿ ಸರಕಾರ, ಯೋಜನೆಗೆ ವಿರೋಧವನ್ನು ಸೂಚಿಸಿ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿತ್ತು. ಆದರೆ ಆ ಬಳಿಕ ಯೋಜನೆ ಬಗ್ಗೆ ಎಲ್ಲೂ ಪ್ರಸ್ತಾಪವಾಗಿರಲಿಲ್ಲ. ಇದೀಗ ಪರಿಸರದ ಜನರಿಗೆ ಸಣ್ಣ ಸುಳಿವು ನೀಡದೇ ಹೊಸ ಯೋಜನೆಯೊಂದನ್ನು ತರಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ.  

ರಾಜ್ಯದ ಹಲವು ಕಡೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ರಾಜ್ಯ ಸರಕಾರ ‘ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ’ಯನ್ನು ಜಾರಿಗೆ ತರುತ್ತಿವೆ. ಅದರಂತೆ ಬೆಳ್ಮಣ್‌ನಲ್ಲಿ ಇದೀಗ ಸ್ವಾಧೀನ ಪಡಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ರಾಸಾಯನಿಕ ಕೈಗಾರಿಕೆಯನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ. 

ಬೆಳ್ಮಣ್ ಗ್ರಾಮ ಪಂಚಾಯತ್‌ಗೆ ಇಲ್ಲಿ ಯಾವ ಕೈಗಾರಿಕೆ ಸ್ಥಾಪಿಸಲಾಗುತ್ತಿದೆ ಎಂಬ ಬಗ್ಗೆ ಸರಕಾರ ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕೆ‌ಐಡಿಬಿ ಅಧಿಕಾರಿಗಳು ಕೂಡ ಯಾವುದೇ ಸುಳಿವನ್ನು ನೀಡದೆ ಎಲ್ಲವನ್ನು ಗೌಪ್ಯವಾಗಿರಿಸಿ ಒಳಗಿಂದೊಳಗೆ ಕೆಲಸ ಆರಂಭಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

 

ಚಿತ್ರ-ವರದಿ: ನಝೀರ್ ಪೊಲ್ಯ

 


Share: